ಅಕ್ಕಮ್ಮ : -  ಸು. 12ನೆಯ ಶತಮಾನ. ಶಿವಶರಣೆ ಹಾಗೂ ವಚನಕಾರ್ತಿ. ಆಚಾರವೇ ಪ್ರಾಣವಾದ ರಾಮೇಶ್ವರಲಿಂಗ ಎಂಬುದು ಈಕೆಯ ವಚನಗಳ ಅಂಕಿತ. ಈಕೆಯ ಬಗೆಗಿನ ಚಾರಿತ್ರಿಕ ಅಂಶಗಳು ತಿಳಿಯುವುದಿಲ್ಲ. ಕೆಲವು ವಚನಗಳು ಮಾತ್ರ ಸಿಕ್ಕಿವೆ. ಇವುಗಳ ಆಧಾರದಿಂದ ಈಕೆಯ ವ್ಯಕ್ತಿತ್ವವನ್ನು ಅರಿಯಬಹುದು. ಈಕೆ ಆಚಾರಕ್ಕೆ ವಿಶೇಷವಾದ ಮಹತ್ತ್ವ ಕೊಟ್ಟಿದ್ದಾಳೆ. ಇವಳ ಒಂದು ವಚನ ಹೀಗಿದೆ:
ಗುರುವಾದರೂ ಆಚಾರಭ್ರಷ್ಟನಾದೊಡೆ ಅನುಸರಿಸಲಾಗದು
ಲಿಂಗವಾದಡೂ ಆಚಾರ ಹಳುವಾದಲ್ಲಿ ಪೂಜಿಸಲಾಗದು
ಜಂಗಮವಾದಡೂ ಆಚಾರ ಅನನುಸರಣಿಯಾದಲ್ಲಿ ಕೂಡಲಾಗದು
ಆಚಾರವೇ ವಸ್ತು ವ್ರತವೇ ಪ್ರಾಣ ಕ್ರಿಯವೇ ಜ್ಞಾನ
ಜ್ಞಾನವೇ ಆಚಾರ ಆಚಾರವೇ ಪ್ರಾಣವಾದ ರಾಮಲಿಂಗ.

ಕದಿರ ರೆಮ್ಮವ್ವೆ                                       
      ಸು. 1600. ಶಿವಶರಣೆ ಹಾಗೂ ವಚನಕಾರ್ತಿ. ಈಕೆಗೆ ಕದಿರ ರೆಮ್ಮವ್ವೆ ಎಂಬ ಹೆಸರೂ ಇದೆ. ರಾಟೆಯಿಂದ ನೂಲು ತೆಗೆಯುವುದು ಈಕೆಯ ಕಾಯಕ. ಕದಿರ ರೆಮ್ಮಿಯೊಡೆಯ ಗುಮ್ಮೇಶ್ವರಾ ಎಂಬುದು ಈಕೆಯ ವಚನಗಳ ಅಂಕಿತ. ಈಕೆಯ ವಚನಗಳು ಬೆಡಗಿನ ವಚನಗಳಂತಿವೆ. ಲೌಕಿಕಕ್ಕೆ ಪಾರಲೌಕಿಕವನ್ನು ಜೋಡಿಸಿ ಹೇಳಿರುವ ಒಂದು ವಚನ ಹೀಗಿದೆ:
ನಾ ತಿರುಹುವ ರಾಟೆಯ ಕುಲಜಾತಿಯ ಕೇಳಿರಣ್ಣಾ
ಅಡಿಯಣ ಹಲಗೆ ಬ್ರಹ್ಮ, ತೋರಣ ವಿಷ್ಣು, 
ನಿಂದಬೊಂಬೆಮಹಾರುದ್ರ
ರುದ್ರನ ಬೆಂಬರೆಯವೆರಡು ಸೂತ್ರದ ಕರ್ಣ
ಅರಿವೆಂಬ ಕದಿರು, ಭಕ್ತಿಯೆಂಬ ಕೈಯಲ್ಲಿ ತಿರುಹಲಾಗಿ
ಸುತ್ತಿತ್ತು ನೂಲು, ಕದಿರು ತುಂಬಿತ್ತು
ರಾಟೆಯ ತಿರುಹಲಾರೆ ಎನ್ನಗಂಡ ಕುಟ್ಟಿಹ
ಇನ್ನೇವೆ ಕದಿರ ರೆಮ್ಮಿಯೊಡೆಯ ಗುಮ್ಮೇಶ್ವರಾ	
(ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ